ಖಾಂಡ್ವಾ-
	ಮಧ್ಯಪ್ರದೇಶ ರಾಜ್ಯದ ಪೂರ್ವ ನೇಮಾಡ ಜಿಲ್ಲೆಯ ಮುಖ್ಯಪಟ್ಟಣ. ಅದೇ ಹೆಸರಿನ ತಹಸೀಲ್. ಉ.ಅ. 29' 50' ಮತ್ತು ಪೂ.ರೇ. 76' 24'ದಲ್ಲಿ ನರ್ಮದಾ ನದೀಕಣಿವೆಯ ಮೇಲೆ, ಸಮುದ್ರಮಟ್ಟದಿಂದ 1,007' (309 ಮೀ.) ಎತ್ತರದಲ್ಲಿದೆ. ಇಲ್ಲಿಯದು ಉಷ್ಣ ವಾಯುಗುಣ. ಮಳೆ 20"-25". ಭೂಮಿ ಫಲವತ್ತಾಗಿದೆ. ತಹಸೀಲಿನಲ್ಲಿ ಹತ್ತಿ ಅಲ್ಲದೆ ಕೆಲಮಟ್ಟಿಗೆ ಗೋದಿ ಮತ್ತು ಕೋಳ ಬೆಳೆಯುತ್ತಾರೆ. ಹತ್ತಿಯಿಂದ ಕಾಳು ತೆಗೆಯುವ ಮತ್ತು ಅದನ್ನು ಬೇಲುಗಳಾಗಿ ಕಟ್ಟುವ ಕಾರ್ಖಾನೆಗಳಿವೆ. ಖಾಂಡ್ವಾ ಹತ್ತಿಯ ಒಂದು ದೊಡ್ಡ ವ್ಯಾಪಾರಸ್ಥಳ. ಖಾಂಡ್ವಾದಲ್ಲಿ ಪಟ್ಟಣದ ಎಲ್ಲ ಅನುಕೂಲಗಳೂ ಉಂಟು. ಇದು ಒಂದು ರೈಲ್ವೆ ಸಂಧಿಸ್ಥಳ. ಮೋಟಾರು ರಸ್ತೆಗಳ ಕೇಂದ್ರ. ಜನಸಂಖ್ಯೆ 85,513 (1971).

	ಪ್ರಾಚೀನ ಕಾಲದಿಂದಲೂ ಖಾಂಡ್ವಾ ಮಹತ್ತ್ವದ ಸ್ಥಾನ ಪಡೆದಿದೆ. ಟಾಲೆಮಿ ಮತ್ತು ಆಲ್ ಬೆರೂನಿ ಇವರ ಬರೆಹಗಳಲ್ಲಿ ಈ ಊರಿನ ಉಲ್ಲೇಖವಿದೆ. ಇದು ಜೈನ ಧರ್ಮದ ಕೇಂದ್ರವಾದ್ದರಿಂದ ಇಲ್ಲಿ ಅನೇಕ ಜೈನಶಿಲ್ಪಗಳನ್ನು ಕಾಣಬಹುದು. 1802 ಇಲ್ಲಿ ಯಶವಂತರಾವ್ ಹೋಳ್ಕರ್ ಮತ್ತು 1858ರಲ್ಲಿ ತಾತ್ಯಾಟೋಪಿ ಇವರು ಈ ಊರನ್ನು ಲೂಟಿಮಾಡಿದ್ದರು.		 *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ